ರೋಮನ್ ಸಂಸ್ಕøತಿ -
ಪ್ರಾಚೀನ ಕಾಲದ ಪಾಶ್ಚಾತ್ಯ ದೇಶದ ಪ್ರಭಾವಶಾಲಿ ಸಂಸ್ಕøತಿಗಳಲ್ಲೊಂದು. ಪ್ರಾಚೀನ ರೋಮ್ ಇಂದಿನ ಆಧುನಿಕ ರೋಮ್ ಇರುವ ಸ್ಥಳದಲ್ಲೇ ಇತ್ತು. ಇದು ಮಧ್ಯ ಇಟಲಿಯ ಪಶ್ಚಿಮ ತೀರದಲ್ಲಿದೆ. ಪ್ರಾಚೀನ ರೋಮನ್ನರು ಹಲವಾರು ಸಾಂಸ್ಕøತಿಕ ಹವ್ಯಾಸಗಳನ್ನು ಪ್ರಾಚೀನ ಗ್ರೀಕರಿಂದ ಪಡೆದುಕೊಂಡಿದ್ದರು. ರೋಮನ್ನರ ದಿನನಿತ್ಯದ ರೂಢಿಗಳು ಮತ್ತು ನಿಯಮಗಳು ಹಾಗೂ ವಾಸ್ತುಶಿಲ್ಪದ ಮಾದರಿ ಹಾಗೂ ಶೈಲಿಗಳಿಗೆ ಗ್ರೀಕರು ಸ್ಫೂರ್ತಿಯಾಗಿದ್ದಾರೆ. ಪ್ರಾಚೀನ ರೋಮನ್ನರು ಮೊದಲಿಗೆ 12 ಪಟ್ಟಿಗಳು ಎಂಬ ನಿಯಮಾನುಸಾರ ಆಳ್ವಿಕೆ ನಡೆಸುತ್ತಿದ್ದರು. ಇದು ಪ್ರತಿಯೊಬ್ಬ ರೋಮನ್ನನಿಗೂ ನೀತಿ ಮತ್ತು ಜೀವನಮಟ್ಟವನ್ನು ಕಲ್ಪಿಸಿಕೊಟ್ಟಿತ್ತು. ಸಂಸ್ಕøತಿಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳು ನ್ಯಾಯಾಧೀಶನ ನಿರ್ದೇಶನಗಳನ್ನು ಅವಲಂಬಿ ಸಿದ್ದವು. ನ್ಯಾಯಾಧೀಶರು ಸಾಮಾನ್ಯವಾಗಿ ಪ್ರಾಮಾಣಿಕರಾಗಿರುತ್ತಿರಲಿಲ್ಲ. 12 ಪಟ್ಟಿಗಳನ್ನು ಅನಂತರ ಸಾಮ್ರಾಟ ಅಗಸ್ಟಸ್ ಅಭಿವೃದ್ಧಿ ಪಡಿಸಿದ (ಗ್ರಾಷಿ). ಇತಿಹಾಸಕಾರರು ಗುರುತಿಸಿರುವಂತೆ ಕೆಲವು ರೋಮನ್ ಸಾಮ್ರಾಟರು ಸಂಶಯಾಸ್ಪದವಾಗಿ ಸಾಯುತ್ತಿದ್ದರು ಅಂದರೆ ಅವರ ಸಾವಿನ ಬಗ್ಗೆ ಯಾವುದೇ ಆಧಾರಗಳು ಇರುತ್ತಿರಲಿಲ್ಲ ಅಥವಾ ಕಡಮೆ ಇರುತ್ತಿದ್ದವು. ಇವೆಲ್ಲವೂ ರೋಮನ್ ಸಾಮ್ರಾಟರು ಆಳಿಕೆ ನಡೆಸುವ ಕಾಲಕ್ಕೆ ಸೇರಿದ್ದು. ತರುವಾಯ ರೋಮ್ ಗಣರಾಜ್ಯವಾಗಿ ಮಾರ್ಪಟ್ಟಿತು.

ದೈನಂದಿನ ಜೀವನ: ಪ್ರಾಚೀನ ರೋಮನ್ನರ ದೈನಂದಿನ ಜೀವನ ಬೆಳಗಿನ ಉಪಾಹಾರದೊಂದಿಗೆ ಪ್ರಾರಂಭವಾಗುತ್ತಿತ್ತು. ಸಾಮಾಜಿಕವಾಗಿ ಕೆಳ ಸ್ತರದಲ್ಲಿದ್ದ ರೋಮನ್ನರನ್ನು ಬಿಬಿಯನ್ಸ್ ಎಂದು ಕರೆಯಲಾಗುತ್ತಿತ್ತು. ಇವರು ಸಾಮಾನ್ಯವಾಗಿ ರೊಟ್ಟಿಯನ್ನು ನೀರು ಅಥವಾ ದ್ರಾಕ್ಷಾರಸದಲ್ಲಿ ಅದ್ದಿ ತಿನ್ನುತ್ತಿದ್ದರು. ಮೇಲ್ದರ್ಜೆಯ ರೋಮನ್ನರನ್ನು ಪೆಟ್ರಿಸಿಯನ್ಸ್ ಎಂದು ಕರೆಯಲಾಗುತ್ತಿತ್ತು. ಇವರು ಮಾಂಸ, ಹಣ್ಣು, ತರಕಾರಿ, ರೊಟ್ಟಿ ಹಾಗೂ ಜೇನನ್ನು ಸೇವಿಸುತ್ತಿದ್ದರು. ರೋಮನ್ನರು ದಿನದ ಆರಂಭದಲ್ಲಿ ಟೋಗ ಎಂಬ ಲುಂಗಿಯಂಥ ವಸ್ತ್ರವನ್ನು ಸುತ್ತಿಕೊಳ್ಳುತ್ತಿದ್ದರು. ಅನಂತರ ವೇಳೆಯಾದಂತೆ ಟ್ಯುನಿಕ್ ಎಂಬ ಆಧುನಿಕ ಟೀಶರ್ಟ್‍ನಂಥ ಬಟ್ಟೆಯನ್ನು ಧರಿಸುತ್ತಿದ್ದರು. ಇದು ಸಹಜವಾ ಗಿತ್ತು. ಚಿಕ್ಕ ಮಕ್ಕಳ ದಿರಸು ಮಂಡಿಯವರೆಗೆ ಇದ್ದು ತಿಳಿಕೆಂಪು ಬಣ್ಣದ ಅಂಚು ಇರುತ್ತಿತ್ತು. ಮಕ್ಕಳು ಪ್ರಾಪ್ತವಯಸ್ಸಿಗೆ ಬಂದಂತೆ ಅವರ ದಿರಸುಗಳು ಬಿಳಿಯ ಬಣ್ಣದವಾಗಿರುತ್ತಿದ್ದುವು. ರೋಮನ್ನರು ಸಾಮಾನ್ಯವಾಗಿ ಸಾರ್ವಜನಿಕ ಸಭಾ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು. ಆ ಸ್ಥಳ ನಗರದ ವಾಣಿಜ್ಯ ಕೇಂದ್ರವಾಗಿದ್ದು ಅಲ್ಲಿ ಜನರು ಲೇವಾದೇವಿ, ವ್ಯಾಪಾರ, ಖರೀದಿ ಮತ್ತು ಮಾರಾಟಗಳನ್ನು ಮಾಡುತ್ತಿದ್ದರು. ಸಾರ್ವಜನಿಕ ಸಭೆ ಸ್ಥಳಗಳಲ್ಲಿ ಸಾರ್ವಜನಿಕ ಭಾಷಣಗಳು, ಹಬ್ಬಗಳು ಮತ್ತು ಧಾರ್ಮಿಕ ಆಚರಣೆಗಳೂ ನಡೆಯುತಿದ್ದವು. ದಿನನಿತ್ಯ ಮಕ್ಕಳು ಸಂಘಟಿತ ಶಾಲೆಗಳಿಗೆ ಹೋಗುತ್ತಿದ್ದರು. ರೋಮನ್ನರು ಪುರಾತನ ಗ್ರೀಕ್ ವಿದ್ಯಾಭ್ಯಾಸ ಪದ್ಧತಿಯನ್ನು ರೂಢಿಸಿ ಕೊಂಡಿದ್ದರು. ಪರಿಣಾಮಾತ್ಮಕ ವಾಗಿ ಮಾತನಾಡುವುದು ಮತ್ತು ಚರ್ಚೆ ಮಾಡುವುದನ್ನು ಕಲಿಯುವುದು ರೋಮ್‍ನ ಶಿಕ್ಷಣದ ಮುಖ್ಯ ಉದ್ದೇಶವಾಗಿತ್ತು. ಶಾಲೆಗಳು ಸೂರ್ಯೋದಯಕ್ಕೆ ಮುಂಚೆಯೇ ಪ್ರಾರಂಭಗೊಂಡು ಮಧ್ಯಾಹ್ನದ ವೇಳೆಗೆ ಅಂತ್ಯಗೊಳ್ಳುತ್ತಿದ್ದುವು. ಕಲಿಕೆಯ ಪ್ರಾರಂಭದ ದಿನಗಳಲ್ಲಿ ಸಾಮಾನ್ಯವಾಗಿ ಮಕ್ಕಳು ಮನೆಯಲ್ಲೇ ತಮ್ಮ ತಂದೆ-ತಾಯಿಗಳಿಂದ ಎಲ್ಲ ಬಗೆಯ ವಿದ್ಯೆಗಳನ್ನೂ ಕಲಿಯುತ್ತಿದ್ದರು. ತಂದೆಯು ಗಂಡು ಮಕ್ಕಳಿಗೆ ರೋಮನ್ ಕಾನೂನು, ಇತಿಹಾಸ, ರೂಢಿ ಆಚರಣೆಗಳು ಮತ್ತು ದೈಹಿಕ ಕಸರತ್ತುಗಳ ತರಬೇತಿಯನ್ನು ನೀಡುತ್ತಿದ್ದ. ಇದು ಅವರನ್ನು ಯುದ್ಧಕ್ಕೆ ಸಿದ್ಧಮಾಡುತ್ತಿತ್ತು. ಹೆಣ್ಣು ಮಕ್ಕಳಿಗೆ ನೂಲುವುದು, ನೇಯುವುದು ಮತ್ತು ಹೊಲಿಗೆ ಹಾಕುವುದನ್ನು ತಾಯಂದಿರು ಕಲಿಸುತ್ತಿದ್ದರು. ಪ್ರಾಚೀನ ರೋಮನ್ನರಲ್ಲಿದ್ದ ಸಾಮಾನ್ಯ ಸಾಂಪ್ರದಾಯಿಕ ರೂಢಿ ಎಂದರೆ ಸಾರ್ವಜನಿಕ ಸ್ನಾನಗೃಹಗಳಿಗೆ ಹೋಗುವುದು. ಬಹಳಷ್ಟು ರೋಮನ್ ಸ್ತ್ರೀ ಪುರುಷರು ದಿನದಲ್ಲಿ ಒಮ್ಮೆಯಾದರೂ ಸ್ನಾನಗೃಹಗಳಿಗೆ ಹೋಗುತ್ತಿದ್ದರು. ಸ್ನಾನಗೃಹಗಳು, ತಣ್ಣೀರು ಮತ್ತು ಬಿಸಿನೀರಿನ ಕೊಳಗಳು, ವಲ್ಲಿ(ಟವೆಲ್), ಗುಲಾಮ ಸೇವಕರು, ಹಬೆಯ ಕೋಣೆಗಳು, ಮಸಾಜು ವ್ಯವಸ್ಥೆ, ವ್ಯಾಯಾಮ ಕೊಠಡಿ ಮತ್ತು ಕ್ಷೌರಗೃಹಗಳನ್ನು ಹೊಂದಿರುತ್ತಿದ್ದವು. ಒಂದು ಕಾಲಕ್ಕೆ ಪ್ರಾಚೀನ ರೋಮ್‍ನಲ್ಲಿ 900 ಸಾರ್ವಜನಿಕ ಸ್ನಾನಗೃಹಗಳಿದ್ದುವೆಂದು ತಿಳಿದುಬರುತ್ತದೆ. ಚಿಕ್ಕ ಸ್ನಾನಗೃಹಗಳಲ್ಲಿ 300 ಜನರು ಸ್ನಾನ ಮಾಡಬಹುದಾಗಿತ್ತು. ದೊಡ್ಡ ಸ್ನಾನಗೃಹಗಳಲ್ಲಿ 1500 ಜನರು ಸ್ನಾನ ಮಾಡಬಹುದಾಗಿತ್ತು. ಈ ರೂಢಿ ಅವರ ಸಂಸ್ಕøತಿಯ ವೈಶಿಷ್ಟ್ಯವಾಗಿತ್ತು. ದಿನಕಳೆದಂತೆ ಶ್ರೀಮಂತ ರೋಮನ್ನರು ವಿಶ್ರಮಿಸುತ್ತಿದ್ದರು ಹಾಗೂ ಬಡವರು ನಿರಂತರವಾಗಿ ಕೆಲಸಮಾಡುತ್ತಿದ್ದರು. ದಿನದ ಅಂತ್ಯದಲ್ಲಿ ರೋಮನ್ನರು ಸಾವಿರಾರು ಸಂಖ್ಯೆಯ ದೇವರುಗಳನ್ನು ಹಲವಾರು ರೀತಿಯಲ್ಲಿ ಪೂಜಿಸುತ್ತಿದ್ದರು. ಸಾಮಾನ್ಯವಾಗಿ ರೋಮನ್ನರು ತಮ್ಮ ಮನೆಗಳಲ್ಲಿ ಒಂದು ಕೊಠಡಿ ಅಥವಾ ಹೊಳೆಯುವ ವಸ್ತುವನ್ನು ದೇವರ ಪೂಜೆಗೋಸ್ಕರವೇ ಹೊಂದಿರುತ್ತಿದ್ದರು. ರೋಮನ್ನರು ಮನರಂಜನೆಯನ್ನು ಕೂಡ ಬಹಳ ಇಷ್ಟಪಡುತ್ತಿದ್ದರು. ಹಲವಾರು ರಂಗಮಂದಿರಗಳಿದ್ದು, ಸಾಮಾನ್ಯವಾಗಿ ಅಲ್ಲಿಗೆ ಮುಕ್ತ ಪ್ರವೇಶವಿದ್ದು, ಶ್ರೀಮಂತ-ಬಡವರೆಲ್ಲರೂ ಯಾವ ಭೇದವಿಲ್ಲದೆ ಭಾಗವಹಿಸುತ್ತಿದ್ದರು.

ರೋಮನ್ನರದು ಪಿತೃಪ್ರಧಾನ ಕುಟುಂಬ ವ್ಯವಸ್ಥೆ. ತಂದೆ ಕುಟುಂಬದ ಯಜಮಾನನಾಗಿರುತ್ತಿದ್ದ ಹಾಗೂ ತನ್ನ ಕುಲವನ್ನು ಪ್ರತಿನಿಧಿಸುತ್ತಿದ್ದ. ವಂಶಪಾರಂಪರ್ಯ ಅಧಿಕಾರದಲ್ಲಿ ಆಸ್ತಿ, ಭೂಮಿ, ನೌಕರರು, ಸ್ವತಂತ್ರರೆ ಲ್ಲರೂ ಯಜಮಾನನ ಅಧೀನದಲ್ಲಿರುತ್ತಿದ್ದರು. ಅಧೀನದಲ್ಲಿರುವವರನ್ನು ಕುಟುಂಬದ ಸದಸ್ಯರೆಂದು ಪರಿಗಣಿಸಲಾಗುತ್ತಿತ್ತು. ಕುಟುಂಬದ ರಕ್ಷಣೆ ಹಾಗೂ ಹೆಚ್ಚು ಉತ್ಪಾದನೆ ಮಾಡುವುದು ಇಂಥ ದೊಡ್ಡ ಕುಟುಂಬದ ಉದ್ದೇಶವಾಗಿತ್ತು. 

ರೋಮನ್ನರು ತಮ್ಮ ಮನೆಗಳನ್ನು ಒಂದು ದೊಡ್ಡ ಅಂಗಳದ ಸುತ್ತ ಕಟ್ಟುತ್ತಿದ್ದು ಅವುಗಳಲ್ಲಿ ಬೇರೆ ಬೇರೆ ಉದ್ದೇಶಗಳಿಗಾಗಿ ಪ್ರತ್ಯೇಕ ದ್ವಾರಗಳಿರುತ್ತಿದ್ದವು. ತೆರೆದ ಚಾವಣಿಯು ಹೊಗೆ ಹೊರ ಹೋಗಲು ಅನುವು ಮಾಡಿಕೊಟ್ಟಿತ್ತು, ಮಳೆ ನೀರು ಒಳ ಬರುವಂತೆ ಮಾಡುತ್ತಿತ್ತು. ತೆರೆದ ಮನೆಯ ಮಧ್ಯದ ಅಂಗಳ(ನಡುಮನೆ) ಸಾಮಾನ್ಯವಾಗಿ ವಿಶ್ರಾಮದ ಸ್ನಾನಗೃಹ, ಕುರ್ಚಿಗಳು ಮತ್ತು ಕೆಲವೊಮ್ಮೆ ಕೈತೋಟವನ್ನು ಹೊಂದಿರುತ್ತಿತ್ತು. ಮನೆಯ ಒಳಾಂಗಣದಲ್ಲಿ ವಿಭಕ್ತ ಕುಟುಂಬಗಳಿಗೆ ಕೊಠಡಿಗಳು, ಒಂದು ಭೋಜನ ಕೊಠಡಿ, ಒಳಾಂಗಣ ಸ್ನಾನ ಕೊಠಡಿಗಳು ಇರುತ್ತಿದ್ದವು. 
ಪ್ರಾಚೀನ ರೋಮನ್ನರು ವಾಸ್ತುಶಿಲ್ಪದ ಕೌಶಲಕ್ಕೆ ಪ್ರಸಿದ್ಧರಾಗಿದ್ದರು. ಅವರು ಮಹಾನ್ ಕಟ್ಟಡಗಳಾದ ಬಯಲುಚಂದ್ರಾಂಗಣ (ಕಲಾಸಿಯಮ್) ಮೇಲ್ಗಾಲುವೆಗಳು (ಆಕ್ವಿಡಕ್ಟ್) ಮತ್ತು ವರ್ತುಲಾಕಾರದ ಸರ್ವದೇವ ಮಂದಿರಗಳು (ಪ್ಯಾಂತಿಯನ್) ಇವುಗಳನ್ನು ಕಟ್ಟಿಸಿದ್ದರು. ಅರ್ಚಕರು ಮೊದಲು ಶಿಲ್ಪಿಗಳಾಗಿದ್ದು ಅವರು “ಏನೇ ಆದರೂ ಅದು ದೇವರ ಇಚ್ಛೆಯಿಂದ” ಎಂದು ಹೇಳಲು ಇಂಥವನ್ನು ನಿರ್ಮಿಸುತ್ತಿದ್ದರು. ರೋಮನ್ ಶಿಲ್ಪಿಗಳು ಮೊದಲಿಗೆ ಗ್ರೀಕರಿಂದ ಈ ಕಲಾವಂತಿಕೆಯನ್ನು ಕಲಿತರು. ಅನಂತರ ತಮ್ಮ ವಿಶಿಷ್ಟವಾದ ಕಲ್ಪನಾತೀತ ಬೆಳೆವಣಿಗೆಯಿಂದ ಪ್ರಪಂಚ ವಿಖ್ಯಾತರಾದರು.
(ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ